ಫರ್ತ್, ಜಾನ್ ರೂಪರ್ವ್ 
	 17-6-1890-14-12-1960 ಪ್ರಸಿದ್ಧ ಭಾಷಾಶಾಸ್ತ್ರಜ್ಞರಲ್ಲಿ ಒಬ್ಬರು. ಇತಿಹಾಸವನ್ನು ಮುಖ್ಯವಿಷಯವಾಗಿ ಆರಿಸಿಕೊಂಡು ಲೀಡ್ಸ್ ಯೂನಿವರ್ಸಿಟಿಯಿಂದ ಪದವೀಧರರಾದರು (1911). ಅನಂತರ ಎಂ.ಎ.ಡಿಗ್ರಿ ಪಡೆದು (1913) ಸ್ವಲ್ಪ ಕಾಲದವರೆಗೆ ಮಾತ್ರ ಇತಿಹಾಸ ಅಧ್ಯಾಪಕರಾಗಿ ಕೆಲಸ ಮಾಡಿದರು. ಪ್ರಥಮ ಮಹಾಸಂಗ್ರಾಮ ಪ್ರಾರಂಭವಾಗುವುದಕ್ಕೆ ಸ್ವಲ್ಪ ಮೊದಲು ಭಾರತದ ಶಿಕ್ಷಣ ಇಲಾಖೆಯಲ್ಲಿದ್ದರು. 1914ರಿಂದ 1918ರವರೆಗಿನ ಕಾಲದಲ್ಲಿ ಯುದ್ಧಕಾಲದ ಸೇವೆಸಲ್ಲಿಸಲು ಆಫ್ಘಾನಿಸ್ತಾನ, ಆಫ್ರಿಕ, ಹಾಗೂ ಭಾರತಗಳಲ್ಲಿ ಇರಬೇಕಾಯಿತು. ಯುದ್ಧ ಕಳೆದ ಮೇಲೆ ಲಾಹೋರಿನ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಭಾಷೆಯ ಪ್ರಾಧ್ಯಾಪಕರಾಗಿ ಸೇರಿ (1920) ಆ ಹುದ್ದೆಯಲ್ಲಿ 1928ರ ವರೆಗೂ ಸೇವೆ ಸಲ್ಲಿಸಿದರು. ಅನಂತರ ತಮ್ಮ ಜನ್ಮಭೂಮಿಯಾದ ಇಂಗ್ಲೆಂಡಿಗೆ ವಾಪಸಾಗಿ ಲಂಡನ್ನಿನ ಯೂನಿವರ್ಸಿಟಿ ಕಾಲೇಜಿನಲ್ಲಿ ಪ್ರಾಧ್ಯಾಪಕ ಡೇನಿಯಲ್ ಜೋನ್ಸರ ಕೈಕೆಳಗೆ ಶಿಕ್ಷಾಶಾಸ್ತ್ರದ ಹಿರಿಯ ಅಧ್ಯಾಪಕರಾಗಿ ಸೇರಿ 1938ರ ವರೆಗೂ ಕೆಲಸ ಮಾಡಿದರು. 1939ರಲ್ಲಿ ಫೆಲೋಷಿಪ್ ದೊರೆತು ಮತ್ತೆ ಭಾರತಕ್ಕೆ ಬಂದು ಗುಜರಾತಿ ಹಾಗೂ ತೆಲುಗು ಭಾಷೆಗಳನ್ನು ಕುರಿತು 15 ತಿಂಗಳ ಕಾಲ ಅಧ್ಯಯನ ಮಾಡಿದರು. 1941ರಲ್ಲಿ ಪ್ರಾಧ್ಯಾಪಕರಾದರು. ದ್ವಿತೀಯ ಮಹಾಸಮರದ ಕಾಲದಲ್ಲಿ ಇವರು ಮತ್ತು ಇವರ ಒಡನಾಡಿಗಳು ವಿವಿಧ ಭಾಷೆಗಳ ಅಭ್ಯಾಸಕ್ಕೆ ಯೋಗ್ಯವಾದ ರೀಡರುಗಳನ್ನು ತಯಾರಿಸುವುದರಲ್ಲಿ ನಿರತರಾಗಿದ್ದರು. 1944ರಲ್ಲಿ ಲಂಡನ್ ಯೂನಿವರ್ಸಿಟಿಯವರು ಜನರಲ್ ಲಿಂಗ್ವಿಸ್ಟಿಕ್ಸಿಗಾಗಿ ಒಂದು ಪೀಠವನ್ನು ತೆರೆದು ಇವರನ್ನು ಆ ವಿಷಯದ ಪ್ರಥಮ ಪ್ರಾಧ್ಯಾಪಕರಾಗಿ ನೇಮಿಸಿದರು. ಮಹಾಸಮರದ ಕಾಲದಲ್ಲಿ ಭಾಷಾಧ್ಯಯನಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ 1946ರಲ್ಲಿ ಸರ್ಕಾರದವರು ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ ಎಂಬ ಪ್ರಶಸ್ತಿಯನ್ನು ಇವರಿಗೆ ದಯಪಾಲಿಸಿದರು. 1956ರಲ್ಲಿ ಕೆಲಸದಿಂದ ವಿಶ್ರಾಂತಿ ಹೊಂದಿದ ಇವರು ಕೇವಲ ನಾಲ್ಕು ವರ್ಷಗಳ ಕಾಲ ಜೀವಿಸಿದ್ದರು. ಇಂಗ್ಲೆಂಡಿನಲ್ಲಿ ಭಾಷಾಶಾಸ್ತ್ರದ ಅಧ್ಯಯನ ಇತಿಹಾಸದಲ್ಲಿ ಒಂದು ಯುಗದ ಅಂತ್ಯವನ್ನು ಇವರ ಮರಣ ಗುರುತಿಸುವುದೆನ್ನಲಾಗಿದೆ.

	ಇವರಿಗೆ ಜೀವನವಿಡಿ ಭಾಷಾಧ್ಯಯನದಲ್ಲಿ ವಿಶೇಷ ಅಭಿರುಚಿಯಿತ್ತು. ಭಾಷಾಶಾಸ್ತ್ರಕ್ಕೆ ಪ್ರತ್ಯೇಕವಾದ ಸ್ಥಾನಮಾನಗಳನ್ನು ಗಳಿಸಿಕೊಡಲು ಇವರು ಹೋರಾಡಿದರು. ಸಾಹಿತ್ಯದ ಮತ್ತು ಭಾಷಾಶಾಸ್ತ್ರದ ಅಧ್ಯಯನಗಳು ಪ್ರತ್ಯೇಕವೆಂದು ಗುರುತಿಸಿದರಾದರೂ ಸಾಹಿತ್ಯದ ಅಧ್ಯಯನದಲ್ಲಿ ಭಾಷಾವೈಜ್ಞಾನಿಕ ಪದ್ಧತಿಗಳನ್ನು ಉಪಯೋಗಿಸಿಕೊಳ್ಳುತ್ತಿದ್ದರು. ಭಾರತದಲ್ಲಿ ಸಾಕಷ್ಟು ಕಾಲವಿರುವ ಅವಕಾಶದಿಂದಾಗಿ ಇವರಿಗೆ ಭಾರತೀಯ ಭಾಷೆಗಳ ಬಗ್ಗೆ ಮತ್ತು ಪಾಣಿನಿಯ ಬಗ್ಗೆ ವಿಶೇಷ ಅಭಿಮಾನವಿತ್ತು. ಇಂಗ್ಲೆಂಡಿನ ಫಿಲಲಾಜಿಕಲ್ ಸೊಸೈಟಿಯ ಸದಸ್ಯರಾಗಿಯೂ ಅನಂತರ ಅಧ್ಯಕ್ಷ (1954-57) ರಾಗಿಯೂ ಇವರು ಸೇವೆ ಸಲ್ಲಿಸಿದರು.

	ಅರ್ಥಯುಕ್ತ ವ್ಯವಹಾರಗಳಿಗೆ ಸಂಬಂಧಿಸಿದಂತೆ ಭಾಷೆಯ ಅಧ್ಯಯನ ಇವರಿಗೆ ವಿಶೇಷವಾಗಿ ಪ್ರಿಯವಾಗಿತ್ತು. ಅರ್ಥವಿಶ್ಲೇಷಣೆಯ ಬಗ್ಗೆ ಹೆಚ್ಚು ಆಸಕ್ತಿ ವಹಿಸದಿದ್ದ ಅಮೆರಿಕನ್ ಭಾಷಾವಿಜ್ಞಾನಿಗಳ ಆ ಕಾಲದ ಅಧ್ಯಯನವನ್ನು ಗಮನಿಸಿದಾಗ ಇವರ ಈ ಕ್ಷೇತ್ರದಲ್ಲಿ ಎಷ್ಟು ಮೊದಲಿಗರಾಗಿದ್ದರು ಹಾಗೂ ಮಾರ್ಗದರ್ಶಕರಾಗಿದ್ದರು ಎಂಬುದು ತಿಳಿದೀತು. ಸಂದರ್ಭೋಚಿತ ಅರ್ಥವಾದ ಹಾಗೂ ಛಂದೋ ವಿಶ್ಲೇಷಣೆ ಈ ಎರಡೂ ಭಾಷಾಶಾಸ್ತ್ರಕ್ಕೆ ಇವರ ಕೊಡುಗೆಗಳು. ವ್ಯಾಕರಣಕ್ಕಿಂತ ಹೆಚ್ಚಾಗಿ ಇವರು ಧ್ವನಿವಿಜ್ಞಾನಕ್ಕೆ ಗಮನ ಕೊಟ್ಟಿದ್ದರು. ಇವರ ಲೇಖನಗಳು ಮಹತ್ತ್ವಪೂರ್ಣ ವಿಚಾರಗಳಿಂದಲೂ, ಸ್ವತಂತ್ರ ಅಭಿಪ್ರಾಯಗಳಿಂದಲೂ ಕೂಡಿವೆ. ಭಾಷಾವಿಶ್ಲೇಷಣಕ್ಕೆ ಹಲವಾರು ಮಾರ್ಗಗಳು ಇರಲು ಸಾಧ್ಯವೆಂದೂ ತಾವು ಮಾತ್ರ ಛಂದೋವಿಶ್ಲೇಷಣ ಪದ್ಧತಿಗೇ ಹೆಚ್ಚು ಪ್ರಾಧಾನ್ಯ ಕೊಡುವುದಾಗಿಯೂ ಇವರು ಹೇಳುತ್ತಿದ್ದರು. ಭಾಷೆಯಲ್ಲಿ ಧ್ವನ್ಯಾತ್ಮಕ ಅಂಶಗಳು, ಛಂದೋಂಶಗಳು ಎಂದು ಎರಡು ಬಗೆಯ ಘಟಕಗಳನ್ನು ಇವರು ಗುರುತಿಸಿದರು. ಸ್ವರಗಳು, ವ್ಯಂಜನಗಳು ಎಂದು ಧ್ವನಾತ್ಮಕ ಅಂಶಗಳಲ್ಲಿ ಏಕವರ್ಣರೂಪಗಳೂ ಒಂದು ಅಥವಾ ಹೆಚ್ಚು ವರ್ಣಗಳಿಗೆ ಹರಡಿಕೊಂಡಿರುವಂತೆ ಛಂದೋಂಶಗಳೂ ಇರಬಲ್ಲವೆಂಬುದನ್ನು ಇವರು ತೋರಿಸಿಕೊಟ್ಟರು.

	ಗ್ರಂಥರೂಪದಲ್ಲಿ ಹೊರಬಂದಿರುವ ಇವರ ಕೃತಿಗಳು ಎರಡೆ : ಸ್ಪೀಚ್ ಮತ್ತು ದಿ ಟಂಗ್ಸ್ ಆಫ್ ಮೆನ್. ಉಳಿದ ಇವರ ಕೃತಿಗಳೆಲ್ಲ ಲೇಖನಗಳಾಗಿ ಉಳಿದಿವೆ. ಇವುಗಳಲ್ಲಿ ಹೆಚ್ಚು ಲೇಖನಗಳು (1934-51) ಇವರ ಮರಣಾನಂತರ ಸಂಗ್ರಹಿಸಲ್ಪಟ್ಟು ಗ್ರಂಥರೂಪದಲ್ಲಿ ಪ್ರಕಾಶಗೊಂಡಿವೆ (1957). ಅವುಗಳಲ್ಲಿ ಈ ಕೆಳಗೆ ಕಾಣಿಸಿರುವ ಲೇಖನಗಳು ಬಹುಮುಖ್ಯವಾದವೆನ್ನಬಹುದು. ದಿ ಟೆಕ್ನೀಕ್ ಆಫ್ ಸೆಮ್ಯಾಂಟಿಕ್ಸ್ : ಆಲ್ಫಬೆಟ್ಸ್ ಅಂಡ್ ಫೋನಾಲೋಜಿ ಇನ್ ಇಂಡಿಯ ಅಂಡ್ ಬರ್ಮ; ದಿ ಇಂಗ್ಲಿಷ್ ಸ್ಕೂಲ್ ಆಫ್ ಪೋನೆಟಿಕ್ಸ್ ; ದಿ ಸೆಮ್ಯಾಂಟಿಕ್ಸ್ ಆಫ್ ಲಿಂಗ್ವಿಸ್ಟಿಕ್ ಸೈನ್ಸ್ ; ಸೌಂಡ್ಸ್ ಅಂಡ್ ಪ್ರೊಸೊಡೀಸ್ ; ಅಟ್ಲಾಂಟಿಕ್ ಲಿಂಗ್ವಿಸ್ಟಿಕ್ಸ್ ; ಜನರಲ್ ಲಿಂಗ್ವಿಸ್ಟಿಕ್ಸ್ ಅಂಡ್ ಡಿಸ್ಕ್ರಿಪ್ಟಿವ್ ಗ್ರ್ಯಾಮರ್ : ಮೋಡ್ಸ್ ಆಫ್ ಮೀನಿಂಗ್.					(ಎಚ್.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ